ನುಮುಲೈಟ್ ಸುಣ್ಣಶಿಲೆಗಳು-
ನುಮುಲೈಟ್ ಮತ್ತು ಅದೇ ಗುಂಪಿಗೆ ಸೇರಿದ ಅಸಿಲೀನ ಮುಂತಾದ ಗತ ಜೀವಿಗಳ ಅವಶೇಷಗಳನ್ನು ಒಳಗೊಂಡಿರುವ ಸುಣ್ಣಶಿಲೆಗಳು. ಈ ಸೂಕ್ಷ್ಮದರ್ಶಕ ಪ್ರಾಣಿಗಳು ಒಂದೇ ಜೀವಕಣದಿಂದಾದ ಪ್ರೋಟೋಜೋóವ ಕುಲಕ್ಕೆ ಸೇರಿದವು. ಇವು ಭೂಚರಿತ್ರೆಯ ಟರ್ಷಿಯರಿ ಯುಗದ ಮೊದಲಿನಲ್ಲಿ ಕಾಣಿಸಿಕೊಂಡು ಇಯೊಸೀನ್ ಕಾಲದಲ್ಲಿ ಅತ್ಯಂತ ವೃದ್ಧಿಯಾಗಿ ಅಲಿಗೊಸೀನ್ ಕಾಲದ ಬಳಿಕ ಗತಿಸಿಹೋದವು. ಈ ಕಾಲದಲ್ಲಿ ಶೇಖರವಾದ ಸುಣ್ಣ ಶಿಲೆಗಳಲ್ಲಿ ಇವುಗಳ ಜೀವ್ಯವಶೇಷಗಳು ವಿಶೇಷವಾಗಿ ಕಂಡುಬರುತ್ತವೆ. ಆದ್ದರಿಂದ ಈ ಸ್ತರಗಳು ಇಯೊಸೀನ್-ಅಲಿಗೋಸೀನ್ ಕಾಲಸೂಚಕವಾಗಿವೆ. ನುಮುಲೈಟ್ ಸ್ತರಗಳು ಮಹಾಹಿಮಾಲಯ ಪ್ರದೇಶದಲ್ಲಿ ಕಾಶ್ಮೀರದಿಂದ ಹಿಡಿದು ಅಸ್ಸಾಮ್‍ವರೆಗೂ ಗುಜರಾತಿನ ಕಚ್, ಸೂರತ್, ಬ್ರೋಚ್‍ಗಳಲ್ಲೂ ರಾಜಸ್ಥಾನದಲ್ಲೂ ಶೇಖರವಾಗಿವೆ. ಅಲ್ಲದೆ ಇವು ಅಂಡಮಾನ್ ದ್ವೀಪ ಮತ್ತು ದಕ್ಷಿಣ ಭಾರತದ ಪಾಂಡಿಚೆರಿಯಲ್ಲೂ ಇವೆ. ಭಾರತದ ಕಲ್ಲೆಣ್ಣೆ ನಿಕ್ಷೇಪಗಳಿಗೆ ಇಯೊಸೀನ್ ಸ್ತರಗಳು ಜನಕಸ್ತರಗಳೆಂದು ಭಾವಿಸಲಾಗಿದೆ. ಇದೇ ಕಾಲದ ಸ್ತರಗಳಲ್ಲಿ ಅಸ್ಸಾಮಿನಲ್ಲಿ ಕಲ್ಲಿದ್ದಲೂ ರಾಜಸ್ಥಾನದಲ್ಲಿ ಲಿಗ್ನೈಟ್ ಪದರಗಳು ಕಂಡುಬಂದಿವೆ.
(ಎಂ.ವಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ